ಮೇರುತುಂಗ
14ನೆಯ ಶತಮಾನದ ಸಂಸ್ಕøತ ಸಂಗ್ರಹಕಾರ. ಪ್ರಬಂಧ ಚಿಂತಾಮಣಿ ಎಂಬ ಸಂಗ್ರಹಿತ ಗ್ರಂಥದಿಂದ ಪ್ರಸಿದ್ಧನಾಗಿದ್ದಾನೆ. ಇದನ್ನು ಈತ ವರ್ಧಮಾನಪುರ ಎಂಬ ಸ್ಥಳದಲ್ಲಿ ರಚಿಸಿದನೆಂದು (1306) ತಿಳಿದುಬರುತ್ತದೆ. ಭಾರತದ ಐತಿಹಾಸಿಕ ಮತ್ತು ಸಾಹಿತ್ಯಕ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕತೆ ಮತ್ತು ಐತಿಹ್ಯಗಳು ಈ ಗ್ರಂಥದಲ್ಲಿವೆ.

ಈ ಗ್ರಂಥವನ್ನು ಜನಕ್ಕೆ ಇಷ್ಟವಾಗಿದ್ದ ಸಂಸ್ಕøತದಲ್ಲಿ (ಈಗೀಗ ಇದನ್ನು ಜೈನ ಸಂಸ್ಕøತವೆಂದು ಕರೆಯುತ್ತಾರೆ) ಬರೆಯಲಾಗಿದೆ. ಅನೇಕ ಕಡೆ ಪ್ರಾಕೃತ ಮತ್ತು ದೇಶೀಯ ಶಬ್ದರೂಪಗಳು ಬೆರೆತಿರುವ ಸಂಸ್ಕøತವಿದು. ಗ್ರಂಥದಲ್ಲಿ ಅಲ್ಲಲ್ಲಿ ಸಂಸ್ಕøತ, ಪ್ರಾಕೃತ, ಅಪಭ್ರಂಶ ಮತ್ತು ಹಳೆಯ ಗುಜರಾತಿ ಹಾಗೂ ಹಳೆಯ ರಾಜಸ್ತಾನಿ ಕೃತಿಗಳಿಂದಲೂ ಉದಾಹರಣೆಗಳನ್ನು ತೆಗೆದುಕೊಳ್ಳಲಾಗಿದೆ. ಎಂದೇ ಇದೊಂದು ಸಂಗ್ರಹಗ್ರಂಥ. ಇದರಲ್ಲಿ ರಾಜರುಗಳ ಪೈಕಿ ವಿಕ್ರಮಾರ್ಕ, ಸಾತವಾಹನ, ಮೂಲರಾಜ, ಮುಂಜ, ಭೋಜ, ಸಿದ್ಧರಾಜ, ಕುಮಾರಪಾಲಿ ಮುಂತಾದವರನ್ನೂ ಕವಿಗಳ ಪೈಕಿ ಕಾಳಿದಾಸ, ಸಿದ್ದಸೇನ, ಮಾಘ, ಧನಫಾಲ ಬಾಣ, ಹೇಮಚಂದ್ರ ಮುಂತಾದವರನ್ನು ಕುರಿತ ಪ್ರಬಂಧಗಳಿವೆ. ಅಲ್ಲದೆ ಶ್ರೇಷ್ಟ ವ್ಯಕ್ತಿಗಳ ಪೈಕಿ ವಸುಪಾಲ, ತೇಜಪಾಲ, ವೀರಧವಳ ಮುಂತಾದವರ ಉಲ್ಲೇಖವೂ ಉಂಟು. ವಿವರಗಳೆಲ್ಲ ನಿಷ್ಕøಷ್ಟವಾದ ಐತಿಹಾಸಿಕ ವಿಷಯಗಳೆಂದು ಹೇಳುವ ಹಾಗಿಲ್ಲ. ಆದರೆ ಈ ಪ್ರಬಂಧಗಳನ್ನು ಓದಿದಾಗ ಆ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆತು ಅವರ ವ್ಯಕ್ತಿತ್ವದ ಬಗ್ಗೆ ಪೂರ್ಣ ಪರಿಚಯವಾಗುತ್ತದೆ. ಅಲ್ಲದೆ ಈ ಪ್ರಬಂಧಗಳಲ್ಲಿ ಆಗಿನ ಸಮಾಜ, ಅರಮನೆಯ ತಿಳಿವಳಿಕೆಗಳು, ಸಾಹಿತ್ಯಿಕ ಸ್ಪರ್ಧೆಗಳು ಮುಂತಾದ ವಿಷಯಗಳು ಹೇರಳವಾಗಿ ದೊರೆಯುತ್ತವೆ. ಹಲವು ಸಂದರ್ಭಗಳಲ್ಲಿ ಕಿರುಗತೆಗಳು ಚತುರ ಹಾಗೂ ಸರಸ ಪ್ರಸಂಗಗಳು ಬಂದಿವೆ. ಜನಪದವನ್ನು ಕುರಿತು ತುಲನಾತ್ಮಕ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಇವು ತುಂಬ ಬೆಲೆಯುಳ್ಳವಾಗಿವೆ.
(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ